ಟುಡೇ ಹಾಸನ ನ್ಯೂಸ್ ವರದಿ, ಚನ್ನರಾಯಪಟ್ಟಣ
ಚನ್ನರಾಯಪಟ್ಟಣ ನಗರದ ಗಣಪತಿ ಪೆಂಡಾಲಿನಲ್ಲಿ ಪ್ರತಿಷ್ಠಾಪಿಸಲಾಗಿರುವ ನವಗ್ರಹ ಗಣೇಶ ಮೂರ್ತಿಗೆ 52 ದಿನಗಳ ಕಾಲ ನಡೆಯುವ ಪ್ರತಿದಿನದ ವಿಶೇಷ ಪೂಜೆಯ ನಿಮಿತ್ತ ಮಂಗಳವಾರದಂದು ಚನ್ನರಾಯಪಟ್ಟಣ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘವು ತನ್ನ ಸದಸ್ಯರು ಹಾಗೂ ಕುಟುಂಬ ವರ್ಗದೊಂದಿಗೆ ಸೇರಿ ಗಣೇಶ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿದರು.
ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ 52 ದಿನಗಳು ಸ್ವಾಮಿಯ ಸನ್ನಿಧಿಯಲ್ಲಿ ಭಕ್ತರು ಪ್ರತಿದಿನ ಪೂಜೆ ಸಲ್ಲಿಸುವುದು ಆಚರಿಸಿಕೊಂಡು ಬಂದಿರುವ ಪದ್ಧತಿ, ಈ ಹಿನ್ನಲೆಯಲ್ಲಿ ಮಂಗಳವಾರದಂದು ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘವು ಸಂಜೆ 7 ಘಂಟೆಗೆ ವಿಘ್ನ ನಿವಾರಕನಿಗೆ ಪೂಜೆ ಸಲ್ಲಿಸಿ, ಸರ್ವ ಭಕ್ತಾದಿಗಳಿಗೆ ಪ್ರಸಾದವನ್ನು ವಿತರಿಸಿದರು.
ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಶ್ರೀ ಪ್ರಸನ್ನ ಗಣಪತಿ ಸೇವಾ ಸಮಿತಿಯು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರು, ಕಾರ್ಯದರ್ಶಿಗಳು ಮತ್ತು ಪದಾಧಿಕಾರಿಗಳು ಹಾಗೂ ಸದಸ್ಯರನ್ನು ಅಭಿನಂದಿಸಿದರು. ಈ ವೇಳೆ ಮಾತನಾಡಿದ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸಿದ್ದರಾಜುರವರು, ಕನ್ನಡ ನಾಡು ಕಲೆ, ಸಂಸ್ಕೃತಿಯ ಬೀಡು, ಇಲ್ಲಿ ಕಲೆಯನ್ನು ಆರಾಧಿಸಿ, ಪೂಜೆಸುವ ಮನಸ್ಥಿತಿ ಹೊಂದಬೇಕು, ಕಲೆಯನ್ನು ಇಂದಿನ ಯುವಪೀಳಿಗೆಗೆ ಪರಿಚಯಿಸಿ, ಆದರಲ್ಲಿ ತೊಡಗಿಸುವ ಹಿನ್ನಲೆಯಲ್ಲಿ ಪಟ್ಟಣದ ಗಣಪತಿ ಪೆಂಡಾಲ್ ಗಣೇಶನನ್ನು ಪ್ರತಿಷ್ಠಾಪಿಸಿ ಪ್ರತಿವರ್ಷ ಸಣ್ಣ ಮಕ್ಕಳಿಂದ ಇಡಿದು ದೊಡ್ಡ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ಅಯೋಜನೆ ಮಾಡಿಸುತ್ತಿರುವುದು ಹೆಮ್ಮೆಯ ವಿಚಾರವೆಂದರು.
ಗಣಪತಿ ಸೇವಾ ಸಮಿತಿ ಅಧ್ಯಕ್ಷ ಸಿ.ಎನ್.ಅಶೋಕ್ ಮಾತನಾಡಿ, ನಾಡಿನ ಕಲೆಗೆ ಸಾಕಷ್ಟು ಗೌರವ, ಮೌಲ್ಯವಿದ್ದು, ಇದನ್ನು ಇಂದಿನ ಮಕ್ಕಳಲ್ಲಿ ಪ್ರೋತ್ಸಾಹಿಸಿ ಬೆಳೆಸುವ ನಿಟ್ಟಿನಲ್ಲಿ ಗಣಪತಿ ಸೇವಾ ಸಮಿತಿಯು ಪ್ರತಿವರ್ಷ ಸ್ಥಳೀಯ ಕಲಾವಿದರಿಗೆ ಹೆಚ್ಚು ಆದ್ಯತೆ ನೀಡಿ ವೇದಿಕೆ ಕಲ್ಪಿಸುವ ಕೆಲಸ ಮಾಡುತ್ತಿದೆ. ಈ ವೇದಿಕೆಯಲ್ಲಿ ಬೆಳೆದು ಇದೀಗ ನಾಡಿನ ಹೆಸರಾಂತ ಕಲಾವಿದರಾಗಿದ್ದಾರೆ. ಸಮಿತಿ ಮಾಡುವ ಸತ್ಕಾರ್ಯಗಳಿಗೆ ಸಾರ್ವಜನಿಕರ ಸಹಕಾರ ಅಗತ್ಯವೆಂದರು.
ಪೂಜಾ ಕಾರ್ಯದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಸಿದ್ದರಾಜು,ಪ್ರಧಾನ ಕಾರ್ಯದರ್ಶಿ ನಟೇಶ್ ಕಾಳೇನಹಳ್ಳಿ, ಖಜಾಂಚಿ ವಿ.ಪಾಂಡುರಂಗ, ನಿರ್ದೇಶಕರುಗಳಾದ ಜಯರಾಂ, ವೆಂಕಟಸ್ವಾಮಿ, ಸಿ.ವಿ.ಲೋಹಿತ್, ಸದಸ್ಯರುಗಳಾದ ನಂದನ್ಪುಟ್ಟಣ, ಐ.ಕೆ.ಮಂಜುನಾಥ್ ಸೇರಿ ಇತರರು ಹಾಜರಿದ್ದರು.
– ವರದಿ : ಐ ಕೆ ಮಂಜುನಾಥ್