ಟುಡೇ ಹಾಸನ ನ್ಯೂಸ್ ವರದಿ
ಹಾಸನ ನಗರಸಭೆಗೆ ಹೊಸದಾಗಿ 25 ಹಳ್ಳಿಗಳು ಸೇರ್ಪಡೆಯಾದ ಬಳಿಕ ವಿವಿಧ ಕೆಲಸಗಳಿಗೆ ಜನರು ತೆರಳಿದಾಗ ನಗರಸಭೆ ಅಧಿಕಾರಿಗಳು ಹಾಗೂ ಸಿಬ್ಬಂದಿ ನಡೆದುಕೊಳ್ಳುವ ರೀತಿ ಹಾಗೂ ಅವರ ವರ್ತನೆ ಬೇಸರ ತಂದಿದೆ. ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕೆಲಸ ಮಾಡಬೇಕು. ಕೂಡಲೇ ಶಾಸಕರು ಹಾಗೂ ನಗಾರಭೆ ಅಧ್ಯಕ್ಷರು ಹಾಗೂ ಆಯುಕ್ತರು ತಮ್ಮ ಸಿಬ್ಬಂದಿಗಳನ್ನು ಹಿಡಿತದಲ್ಲಿ ಇಟ್ಟುಕೊಳ್ಳಬೇಕು ಎಂದು ನಾಗರಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಪ್ರಸಂಗ ನಡೆಯಿತು.
ಹಾಸನ ನಗರದ ವಿದ್ಯಾನಗರ ಬಡಾವಣೆಯ ಫ್ರೀಡಂ ಪಾರ್ಕ್ನಲ್ಲಿ ಆಯೋಜಿಸಿದ್ದ ಅಹವಾಲು ಸ್ವೀಕಾರ ಸಭೆಯಲ್ಲಿ ನಗರಸಭೆ ಆಯುಕ್ತರು ಹಾಗೂ ಅಧಿಕಾರಿಗಳ ಬಗ್ಗೆ ಬಡಾವಣೆ ನಿವಾಸಿಗಳು ಆರೋಪಗಳ ಸುರಿಮಳೆಗೈದರು. ಆನರನ್ನು ಶಾಂತವಾಗಿಸಲು ಶಾಸಕ ಎಚ್.ಪಿ.ಸ್ವರೂಪ್ ಅವರು ಹರಸಾಹಕ ಪಟ್ಟರು.
ಸಾರ್ವಜನಿಕರ ಕೆಲಸಗಳನ್ನು ಮಾಡಿಕೊಡುವ ವಿಚಾರದಲ್ಲಿ ವಿಳಂಬ ನೀತಿ ಅನುಸರಿಸುವುದು, ಜನರ ಜೊತೆ ದುರ್ವರ್ತನೆ ತೋರುವ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ಕ್ರಮ ಜರುಗಿಸಬೇಕು. ನಗರಸಭೆಯಲ್ಲಿ ಲಂಚದ ಹಾವಳಿಯೂ ಸದ್ದು ಮಾಡುತ್ತಿದೆ. ಹಣ ನೀಡಿದರೆ ಏನು ಕೆಲಸ ಬೇಕಾದರೂ ಮಾಡಿಕೊಡುತ್ತಾರೆ. ಇಲ್ಲದಿದ್ದರೆ ಅನಗತ್ಯ ಕಾಲಹರಣ ಮಾಡಿ ಅಲೆದಾಡಿಸುತ್ತಾರೆ ಎಂದು ಬಡಾವಣೆ ನಿವಾಸಿಗಳು ಆರೋಪಿಸಿದರು.
ಅಮೃತ್ ಯೋಜನೆಯ ಕಾಮಗಾರಿಗಳು ಅರ್ಧಕ್ಕೆ ನಿಂತಿದೆ ಕೂಡಲೇ. ಅದನ್ನು ಪೂರ್ಣಗೊಳಿಸಿ, ಬಡಾವಣೆ ನಿವಾಸಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಕೆಲವೆಡೆ ವಿದ್ಯುತ್ ಕಂಬಗಳ ಸಮಸ್ಯೆ ನಿವಾರಿಸಿ ಸಮರ್ಪಕ ವಿದ್ಯುತ್ ಒದಗಿಸಬೇಕು. ಪಾರ್ಕ್ನ ಗೇಟ್ ದುರಸ್ತಿ ಆಗಬೇಕು. ಪಾರ್ಕ್ ಪಕ್ಕದಲ್ಲೇ ದನಕರುಗಳನ್ನು ಕಟ್ಟುವ ಪರಿಪಾಠವನ್ನು ಕೆಲವರು ರೂಢಿಸಿಕೊಂಡಿದ್ದು, ಆ ಭಾಗ ಸಗಣಿ ತಿಪ್ಪೆಯಾಗಿ ಮಾರ್ಪಟ್ಟದೆ. ಪರಿಣಾಮ ಸೊಳ್ಳೆ, ನೊಣಗಳ ಆವಾಸ ಸ್ಥಾನವಾಗಿದ್ದು, ಅನಾರೋಗ್ಯದ ಭೀತಿ ಎದುರಾಗಿದೆ. ಕೂಡಲೇ ಈ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕು ಎಂದು ಹಲವರು ಒತ್ತಾಯಿಸಿದರು.
ಬಡಾವಣೆಯಲ್ಲಿ ಅಲ್ಪ ಮಟ್ಟದಲ್ಲಿ ಒತ್ತುವರಿ ಮಾಡಿ ಮನೆ ಕಟ್ಟಿರುವವರಿಗೆ ಹಾಕಲಾಗುವ ತೆರಿಗೆ ಪ್ರಮಾಣವನ್ನು ಮಾನವೀಯ ದೃಷ್ಟಿಯಿಂದ ಕಡಿಮೆ ಮಾಡಬೇಕು. ಸ್ವಂತ ಜಾಗದಲ್ಲಿ ಮನೆ ಕಟ್ಟಿರುವವರಿಗೆ ಇದು ಹೊರೆಯಾಗುತ್ತಿದ್ದು ಈ ಬಗ್ಗೆ ಶಾಸಕರು, ಜಿಲ್ಲಾಡಳಿತ ಹಾಗೂ ನಗರಸಭೆ ಅಧಿಕಾರಿಗಳು ಗಮನಹರಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಮನವಿ ಮಾಡಿದರು.
ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಬಳಿಕ ಶಾಸಕ ಎಚ್.ಪಿ.ಸ್ವರೂಪ್ ಮಾತನಾಡಿ, ನಗರಸಭೆಯಲ್ಲಿ ಅಧಿಕಾರಿಗಳ ವರ್ತನೆ ಬದಲಾಯಿಸಿಕೊಂಡು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಈ ಬಗ್ಗೆ ಆಯುಕ್ತರು ಗಮನ ಹರಿಸಬೇಕು. ಇ-ಖಾತೆ ಬಗ್ಗೆ ಅನೇಕ ದೂರುಗಳು ಕೇಳಿ ಬಂದಿದ್ದು ಅವುಗಳ ಬಗ್ಗೆ ಹೆಚ್ಚಿನ ನಿಗಾ ವಹಿಸಿ ಶೀಘ್ರವಾಗಿ ಸಮಸ್ಯೆ ಬಗೆಹರಿಸಬೇಕು ಎಂದು ಸೂಚನೆ ನೀಡಿದರು.
ಸಭೆಯಲ್ಲಿ ನಗರಸಭೆ ಅಧ್ಯಕ್ಷ ಚಂದ್ರೇಗೌಡ, ಆಯುಕ್ತ ನರಸಿಂಹ ಮೂರ್ತಿ ಇತರರು ಭಾಗವಹಿಸಿದ್ದರು.