ಒಂದೇ ಕಟ್ಟಡದಲ್ಲಿ ಸೇವೆಯನ್ನು ನೀಡಿದರೆ ಜನರಿಗೆ ಶೀಘ್ರದಲ್ಲಿ ಸೌಲಭ್ಯ ದೊರೆಯುವುದರ ಜೊತೆಗೆ ಅನಾವಶ್ಯಕವಾಗಿ ಅಲೆಯುವುದು ತಪ್ಪುತ್ತದೆ : ಶಾಸಕ ಸಿಮೆಂಟ್ ಮಂಜು

0
12

ಟುಡೇ ಹಾಸನ ನ್ಯೂಸ್‌ ವರದಿ ಆಲೂರು

ಕಂದಾಯ ಇಲಾಖೆಗೆ ಒಳಪಡುವ ಎಲ್ಲಾ ಕಚೇರಿಗಳು ಒಂದೇ ಕಟ್ಟಡದಲ್ಲಿ ಸೇವೆಯನ್ನು ನೀಡಿದರೆ ಜನರಿಗೆ ಶೀಘ್ರದಲ್ಲಿ ಸೌಲಭ್ಯ ದೊರೆಯುವುದರ ಜೊತೆಗೆ ಅನಾವಶ್ಯಕವಾಗಿ ಅಲೆಯುವುದು ತಪ್ಪುತ್ತದೆ ಎಂದು ಆಲೂರು-ಸಕಲೇಶಪುರ ಕ್ಷೇತ್ರದ ಶಾಸಕ ಸಿಮೆಂಟ್ ಮಂಜು ತಿಳಿಸಿದರು.

ಮಿನಿ ವಿದಾನಸೌಧ ಮೊದಲ ಅಂತಸ್ತು ಕಟ್ಟಡದಲ್ಲಿ ಕಂದಾಯ ಇಲಾಖೆ ಸಂಬಂಧಿಸಿದ ಕಚೇರಿಗಳ ಉದ್ಘಾಟನಾ ಕಾರ್ಯಕ್ರಮದ ಪೂಜಾ ವಿಧಿ ವಿಧಾನಗಳಲ್ಲಿ ಭಾಗವಹಿಸಿ ಮಾತನಾಡಿದ ಅವರು, ಆಲೂರು ಪಟ್ಟಣದ ಮಿನಿವಿಧಾನಸೌಧ ಆವರಣದಲ್ಲಿ ಆಯೋಜಿಸಿದ್ದ ಹೆಚ್ಚುವರಿ ಕಟ್ಟಡಗಳ ಉದ್ಘಾಟನಾ ಕಾರ್ಯಕ್ರಮವನ್ನು ನೆರವೇರಿಸಿ ಮಾತನಾಡಿದರು. ತಾಲ್ಲೂಕು ಕಚೇರಿಗೆ ದಿನನಿತ್ಯ ರೈತರು, ಸಾರ್ವಜನಿಕರು, ವಿದ್ಯಾರ್ಥಿಗಳು, ಅಂಗವಿಕಲರು ಸೇರಿದಂತೆ, ನೂರಾರು ಸಂಖ್ಯೆಯಲ್ಲಿ ಹಲವು ಸೇವೆಗಳಿಗಾಗಿ ಕಂದಾಯ ಇಲಾಖೆಗೆ ಬರುತ್ತಾರೆ. ಸರ್ವೆ ಇಲಾಖೆ, ಜನನ ಮರಣ ಅಂಕಿ ಅಂಶಗಳ ಇಲಾಖೆ, ಖಜಾನೆ, ಚುನಾವಣೆ ಶಾಖೆ, ಭೂಮಿ, ಆಹಾರ ಇಲಾಖೆ, ರೇಕಾರ್ಡು ರೂಂ ಸೇರಿದಂತೆ ಹಲವು ಕಚೇರಿಗಳು ಕಂದಾಯ ಇಲಾಖೆಯಲ್ಲಿ ಇರಬೇಕಾದ ಅನಿವಾರ್ಯತೆಯಿದೆ. ಕಟ್ಟಡವಿಲ್ಲದಿರುವುದರಿಂದ ಪಟ್ಟಣದ ಖಾಸಗಿ ಕಟ್ಟಡಗಳಲ್ಲಿ, ಸಬ್ ರಿಜಿಷ್ಟಾರ್, ವಿ.ಎ ನಾಡಕಚೇರಿ ಕಾರ್ಯನಿರ್ವಹಿಸುತ್ತಿದ್ದವು. ಹೊರಗಡೆ ಕಾರ್ಯನಿರ್ವಹಿಸುತ್ತಿರುವ ವಿವಿಧ ಇಲಾಖೆಗಳು 15 ದಿನದೊಳಗೆ ಈ ಕಟ್ಟಡಕ್ಕೆ ಸ್ಥಳಾಂತರ ಮಾಡಬೇಕು ಎಂದು ಸೂಚಿಸಿದರು.

ಲಿಫ್ಟ್ ಅಳವಡಿಕೆಗೆ ಕ್ರಮ : ಕಟ್ಟಡ ಎರಡು ಅಂತಸ್ತುಗಳನ್ನು ಹೊಂದಿರುವುದರಿAದ ಜನಸಾಮಾನ್ಯರು ವೃದ್ಧರು ಕಟ್ಟಡವನ್ನು ಹತ್ತಿ-ಇಳಿಯಲು ಸಾಧ್ಯವಾಗುವುದಿಲ್ಲ ಲಿಫ್ಟ್ ಅಳವಡಿಸಲು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಂದ ಅಂದಾಜುಪಟ್ಟಿ ತಯಾರಿಸಲಾಗಿದ್ದು ಸರ್ಕಾರಕ್ಕೆ ಮೊಖ್ತವಾಗಿ ತೆಗೆದುಕೊಂಡು ಹೋಗಿ ಮಂಜೂರು ಮಾಡಿಸಿ ತುರ್ತಾಗಿ ಕಾಮಗಾರಿ ಪ್ರಾರಂಭಿಸಲು ಪ್ರಯತ್ನ ಪಡುತ್ತೇನೆ ಎಂದರು.

ಇದೇ ಸಂದರ್ಭದಲ್ಲಿ ಕೆ.ಹೊಸಕೋಟೆ ಹೋಬಳಿಯ ವಿವಿಧ ಹಳ್ಳಿಗಳ ಗ್ರಾಮಸ್ಥರು ಸರ್ಕಾರಿ ಜಾಗದಲ್ಲಿ ಮನೆ ಕಟ್ಟಿಕೊಂಡಿದ್ದ ಅರ್ಹ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಿ ಮಾತನಾಡಿದ ಶಾಸಕರು ಕಂದಾಯ ಇಲಾಖೆಗೆ ಸಂಬಂಧಪಟ್ಟ ಬಗರು ಹುಕುಂ, ಪೋಡಿ ವಿಚಾರ, ದುರಸ್ಥಿ, ತುಂಡು ಭೂಮಿ ಕಾಯಿದೆ ಸೇರಿದಂತೆ ಹಲವಾರು ವಿಚಾರಗಳು ಬಗೆಹರಿಯದೆ ನೆನೆಗುದಿಗೆ ಬಿದ್ದಿವೆ ಈ ಬಗ್ಗೆ ಕಂದಾಯ ಸಚಿವರೊಂದಿಗೆ ಚರ್ಚಿಸಿದ್ದೇನೆ ಇನ್ನೂ ಮುಂದೆ ಸಾರ್ವಜನಿಕರಿಗೆ ಹೆಚ್ಚು ಪ್ರಯೋಜನವಾಗಲಿದೆ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಶೃತಿ,ತಹಸೀಲ್ದಾರ್ ನಂದಕುಮಾರ್ ಗ್ರೇಡ್ 2 ತಹಸೀಲ್ದಾರ್ ಪೂರ್ಣಿಮಾ, ಪ.ಪಂ ಅಧ್ಯಕ್ಷೆ ತಾಹೇರಾ ಬೇಗಂ , ತಾಲ್ಲೂಕು ಜೆ.ಡಿ.ಎಸ್ ಅಧ್ಯಕ್ಷ ಕೆ.ಎಸ್ ಮಂಜೇಗೌಡ, ಬಿ.ಜೆ.ಪಿ ತಾಲ್ಲೂಕು ಅಧ್ಯಕ್ಷೆ ಉಮಾ ರವಿಪ್ರಕಾಶ್, ಬಿ.ಜೆ.ಪಿ ಮುಖಂಡರಾದ ಅಜಿತ್ ಕಣಗಾಲು, ರುದ್ರೇಗೌಡ, ಪೂವಯ್ಯ, ಕೃಷ್ಣಮೂರ್ತಿ, ರುದ್ರೇಗೌಡ, ದೊರೆಗೌಡ, ಬಾಲಲೋಚನಾ, ಆಕಾಶವಾಣಿ ಮಂಜಣ್ಣ ಮುಂತಾದವರು ಉಪಸ್ಥಿತರಿದ್ದರು.