ತಹಶಿಲ್ದಾರ್ ಮಮತಾ ರವರ ಕಾರ್ಯ ಶ್ಲಾಘನೀಯ : ಅಧ್ಯಕ್ಷ ನರಸಿಂಹಸ್ವಾಮಿ.

0
32

ಬೇಲೂರು ತಾಲ್ಲೂಕು ತಹಶೀಲ್ದಾರ್ ಮತ್ತು ತಾಲೂಕು ದಂಡಾಧಿಕಾರಿಗಳಾದ ಎಂ.ಮಮತಾ ಅವರನ್ನು ಶ್ರೀ ಲಕ್ಷ್ಮಿ ಮಂಗಳವಾಧ್ಯ ಮತ್ತು ಸಂಗೀತ ಕಲಾ ಸೇವಾ ಟ್ರಸ್ಟ್ (ರಿ) ವತಿಯಿಂದ ನೀಡಲಾಗುವ “ಸಮಾಜ ಸೇವಾ ರತ್ನ” ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಈ ವೇಳೆ ಶ್ರೀ ಲಕ್ಷ್ಮಿ ಮಂಗಳವಾಧ್ಯ ಮತ್ತು ಸಂಗೀತ ಕಲಾ ಸೇವಾ ಟ್ರಸ್ಟ್ (ರಿ) ಅಧ್ಯಕ್ಷರಾದ ನರಸಿಂಹಸ್ವಾಮಿ ಮಾತನಾಡಿ, ಸರ್ಕಾರಿ ಅಧಿಕಾರಿಗಳು ಸಾಮಾನ್ಯ ಜನರಿಗೆ ಹತ್ತಿರವಾಗಿ ಕೆಲಸ ಮಾಡುವವರ ಸಂಖ್ಯೆ ತುಂಬಾ ವಿರಳ, ಇಂತವರ ಮಧ್ಯೆ ಸಾಮಾಜಿಕ ಕಳಕಳಿಯಿಂದ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಕಾರ್ಯನಿರ್ವಹಿಸುತ್ತಿರುವ ನಮ್ಮ ಬೇಲೂರು ತಾಲೂಕಿನ ತಹಶಿಲ್ದಾರ್ ಮಮತಾ ಅವರ ಕಾರ್ಯ ನಿಜಕ್ಕೂ ಶ್ಲಾಘನೀಯ, ಜನಸಾಮಾನ್ಯರ ಹಲವಾರು ಸಮಸ್ಯೆಗಳನ್ನು ಬಗೆಹರಿಸುವ ಮೂಲಕ ಸಾರ್ವಜನಿಕರಿಗೆ ಅತ್ಯುತ್ತಮ ಆಡಳಿತ ಸೇವೆ ನೀಡಿರುವುದು ಸಂತಸ ತಂದಿದೆ. ಆದ್ದರಿಂದ ಇಂದು ಮಹಾತ್ಮ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ರವರ ಜಯಂತಿ ಆಚರಣೆಯ ಸಂದರ್ಭದಲ್ಲಿ ಶ್ರೀ ಲಕ್ಷ್ಮೀ ಮಂಗಳವಾದ್ಯ ಮತ್ತು ಸಂಗೀತ ಕಲಾ ಸೇವಾ ಟ್ರಸ್ಟ್ ವತಿಯಿಂದ ಸಮಾಜ ಸೇವಾರತ್ನ ಪ್ರಶಸ್ತಿ ನೀಡುವ ಮೂಲಕ ಬೇಲೂರು ತಾಲ್ಲೂಕು ತಹಶೀಲ್ದಾರ್ ಮತ್ತು ತಾಲೂಕು ದಂಡಾಧಿಕಾರಿಗಳಾದ ಎಂ.ಮಮತಾ ಅವರನ್ನು ಗೌರವಿಸುತ್ತಿರುವುದು ಸಂತಸದ ವಿಚಾರ ಎಂದು ಹೇಳಿದರು.

ನಂತರ ಸಮಾಜ ಸೇವಕ ಸುಲೆಮಾನ್ ಮಾತನಾಡಿ, ಬೇಲೂರು ಇತಿಹಾಸದಲ್ಲಿ ಒಬ್ಬ ದಂಡಾಧಿಕಾರಿಯಾಗಿ ಸ್ಥಳೀಯವಾಗಿ ಆಗುತ್ತಿರುವ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಸ್ಥಳಕ್ಕೆ ತೆರಳಿ ಶೀಘ್ರವಾಗಿ ಅವುಗಳನ್ನು ಬಗೆಹರಿಸುತ್ತಿರುವ ತಹಶೀಲ್ದಾರ್ ಮಮತಾ ಅವರ ಕಾರ್ಯ ಇತರ ಅಧಿಕಾರಿಗಳಿಗೂ ಮಾದರಿಯಾಗುವಂತಹದ್ದು, ಇಂತಹ ನಿಷ್ಠಾವಂತಹ ಅಧಿಕಾರಿಗಳು ಇರುವುದು ಬೇಲೂರಿಗೆ ಹೆಮ್ಮೆಯ ವಿಚಾರ. ಪ್ರಮುಖವಾಗಿ ಜನಸಾಮಾನ್ಯರಿಗೆ ಹತ್ತಿರವಾಗಿ ಕೆಲಸಮಾಡುತ್ತಿರು ಪರಿ ನಿಜಕ್ಕೂ ಮೆಚ್ಚುವಂತಹದ್ದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ವೇಳೆ ಬೇಲೂರು ತಾಲ್ಲೂಕು ಸವಿತಾ ಸಮಾಜದ ಮಹಿಳಾ ಸಂಘದ ಕಾರ್ಯದರ್ಶಿ ಗೀತಾ, ಶ್ರೀ ಲಕ್ಷ್ಮಿ ಮಂಗಳ ವಾದ್ಯ ಮತ್ತು ಸಂಗೀತ ಕಲಾ ಸೇವಾ ಟ್ರಸ್ಟ್ ನ ಕಾರ್ಯದರ್ಶಿ ಅನೀಲ್ ಕುಮಾರ್, ನಿರ್ದೇಶಕರಾದ ಬಿ.ಕೆ ವಿಷ್ಣು ಪ್ರಸಾದ್, ಕೇಶವಮೂರ್ತಿ ಸೇರಿದಂತೆ ಮತ್ತಿತರರು ಹಾಜರಿದ್ದರು.