ಚೌಡಮ್ಮ ದೇವಿಯ ನವರಾತ್ರಿ ಉತ್ಸವಕ್ಕೆ ವಿದ್ಯುಕ್ತ ತೆರೆ

0
21

ಬೇಲೂರು ತಾಲೂಕು ಅರೇಹಳ್ಳಿ ಹೋಬಳಿಯ ವಾಟೇಹಳ್ಳಿಯಲ್ಲಿರುವ ಚೌಡಮ್ಮದೇವಿ ದೇವಸ್ಥಾನದಲ್ಲಿ ಚೌಡಮ್ಮದೇವಿ ದೇವಸ್ಥಾನ ಸೇವಾಭಿವೃದ್ಧಿ ಟ್ರಸ್ಟ್ ಹಾಗೂ ಉತ್ಸವ ಸಮಿತಿಯ ಸಹಯೋಗದಲ್ಲಿ ಕಳೆದ ಒಂಬತ್ತು ದಿನಗಳ ಕಾಲ ವಿಜೃಂಭಣೆಯಿಂದ ಜರುಗಿದ ನಾನಾ ಪೂಜಾ ಕೈಂಕರ್ಯಗಳಿಗೆ ವಿದ್ಯುಕ್ತ ತೆರೆ ಬಿದ್ದಿತು.

ಈ ವೇಳೆ ಚೌಡಮ್ಮ ದೇವಿ ದೇವಸ್ಥಾನ ಸೇವಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಮಂಜುನಾಥ್ ಶೆಟ್ಟಿ ಮಾತನಾಡಿ, ನವರಾತ್ರಿಯ ಮೊದಲ ದಿನ ಗಣಪತಿ ಹೋಮ , ಪಂಚಾಮೃತ ಅಭಿಷೇಕ ಹೂವಿನ ಅಲಂಕಾರ ಪೂಜೆಯೊಂದಿಗೆ ಆರಂಭಗೊಂಡು 10ನೇ ದಿನವಾದ ವಿಜಯ ದಶಮಿಯಂದು ಗಣಪತಿ ಹೋಮ, ಕಲಾಭಿವೃದ್ಧಿ ಹೋಮ, ದುರ್ಗ ಹೋಮ, ಗಣ ಹೋಮ ಹಾಗೂ ವಿಶೇಷ ಅಲಂಕಾರ ಪೂಜೆಯ ಬಳಿಕ ಮಹಾ ಮಂಗಳಾರತಿ ಜರುಗಿತು. ಪೂಜಾ ಮಹೋತ್ಸವಕ್ಕೆ ನೆರವು ನೀಡಿದ ಶಾಸಕ ಹುಲ್ಲಳ್ಳಿ ಸುರೇಶ್, ಮುಖಂಡ ತುಳಸಿದಾಸ್, ವಿರೂಪಾಕ್ಷ, ತ್ಯಾಗರಾಜ್, ಐಬಿಸಿ ಎಸ್ಟೇಟ್ ಮ್ಯಾನೇಜರ್ ಪ್ರಭಾಕರ್ ಸೇರಿದಂತೆ ಒಟ್ಟು 125 ದಾನಿಗಳನ್ನು ಗೌರವಿಸಲಾಯಿತು. ಹರಕೆ ಹೊತ್ತು ಬಂದು ದೇವಿಗೆ ಭಕ್ತಿಯಿಂದ ಅಮವಾಸ್ಯೆ ಪೂಜೆ ಮಾಡಿದರೆ ಇಷ್ಟಾರ್ಥ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿಂದ ಅರೇಹಳ್ಳಿ ಹೋಬಳಿ ವ್ಯಾಪ್ತಿಯ ಸಹಸ್ರಾರು ಸಂಖ್ಯೆಯ ಭಕ್ತಾದಿಗಳು ದೇವಿಯ ವಿಶೇಷ ಪೂಜೆಯಲ್ಲಿ ಭಾಗವಹಿಸುತ್ತಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಟ್ರಸ್ಟ್ ಅಧ್ಯಕ್ಷ ಮಂಜುನಾಥ್ ಶೆಟ್ಟಿ, ಖಜಾಂಚಿ ಲಕ್ಷ್ಮಣ್ ರಾಜ್ ಅರಸ್, ಸದಸ್ಯ ಅಶೋಕ್ ರಾಜ್ ಅರಸ್, ಉತ್ಸವ ಸಮಿತಿ ಅಧ್ಯಕ್ಷ ಲೋಹಿತ್, ಕಾರ್ಯದರ್ಶಿ ಪದ್ಮರಾಜ್ ಅರಸ್, ಉಪಾಧ್ಯಕ್ಷ ಆನಂದ್ ಶೆಟ್ಟಿ, ಖಜಾಂಚಿ ಮಹೇಶ್ ನಾಯಕ್ ಹಾಗೂ ಇತರ ಸದಸ್ಯರು ಪೂಜಾ ಕಾರ್ಯಕ್ರಮದ ನೇತೃತ್ವ ವಹಿಸುವುದರ ಮೂಲಕ ಯಶಸ್ವಿಗೊಳಿಸಿದರು.

ವರದಿ : ರಂಜೀತ್ ಕುಮಾರ್ ಕೆ.ಎಸ್