ಮಹಿಳಾ ಸ್ವಾತಂತ್ರ್ಯ ಹೋರಾಟಗಾರರ ಇತಿಹಾಸದಲ್ಲಿ ವೀರ ಮಹಿಳೆ ಕಿತ್ತೂರು ರಾಣಿ ಚನ್ನಮ್ಮ ಅಗ್ರ ಗಣ್ಯರು – ತಹಸೀಲ್ದಾರ್ ಎಂ ಮಮತ ಮೆಚ್ಚುಗೆ

0
62

ಟುಡೇ ಹಾಸನ ನ್ಯೂಸ್‌ ವರದಿ, ಬೇಲೂರು.

ದಕ್ಷಿಣ ಭಾರತದ ಮಹಿಳಾ ಸ್ವಾತಂತ್ರ್ಯ ಹೋರಾಟಗಾರರ ಇತಿಹಾಸದಲ್ಲಿ ವೀರ ಮಹಿಳೆ ಕಿತ್ತೂರು ರಾಣಿ ಚನ್ನಮ್ಮ ಅಗ್ರ ಗಣ್ಯರು..ಅವರ ಸಾಧನೆ ನಿಜಕ್ಕೂ ಸ್ಪೂರ್ತಿ ಎಂದು ಬೇಲೂರು ತಹಸೀಲ್ದಾರ್ ಎಂ ಮಮತ ಹೇಳಿದರು.


ಬೇಲೂರು ಪಟ್ಟಣದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ನಡೆದ ಕಿತ್ತೂರು ರಾಣಿ ಚೆನ್ನಮ್ಮ ಇವರ ಜನ್ಮ ದಿನಾಚರಣೆ ಸಮಾರಂಭ ಉದ್ಘಾಟನೆ ನಡೆಸಿ ಮಾತನಾಡಿದ ಅವರು ವೀರತನ, ಧೈರ್ಯ, ಶೌರ್ಯ ಹಾಗೂ ಹೋರಾಟವನ್ನು ಮೈಗೂಡಿಸಿಕೊಂಡು ಪುರುಷ ಪ್ರಧಾನ ಸಮಾಜದಲ್ಲಿ ರಾಜ್ಯಭಾರ ಮಾಡಿದಂತಹ ಕೆಚ್ಚೆದೆಯ ಮಹಿಳೆ ಕಿತ್ತೂರು ಚನ್ನಮ್ಮ ಎಂದು ಬಣ್ಣಿಸಿದ ಅವರು ರಾಜ್ಯ ರಕ್ಷಣೆಗಾಗಿ ಬ್ರಿಟಿಷರ ವಿರುದ್ಧ ಸಿಡಿದು ರಣರಂಗದಲ್ಲಿ ಕತ್ತಿ ಹಿಡಿದು ಹೋರಾಟ ಮಾಡಿದ ದಕ್ಷ ಆಡಳಿತಗಾರಳಾಗಿದ್ದ ಚನ್ನಮ್ಮಳ ಧೈರ್ಯ, ಸಾಧನೆಗಳು ಮತ್ತು ಆಡಳಿತ ವಿಧಾನ ಎಲ್ಲರಿಗೂ ಆದರ್ಶಪ್ರಾಯವಾಗಿದ್ದು, ಅವರ ತತ್ವಾದರ್ಶಗಳನ್ನು ಯುವ ಜನತೆ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಆಗ ಮಾತ್ರ ಜಯಂತಿ ಆಚರಣೆಗೆ ಅರ್ಥ ಬರಲಿದೆ ಎಂದು ತಿಳಿಸಿದರು.

ಬೇಲೂರು ತಾಲ್ಲೂಕು ಕಸಾಪ ಅಧ್ಯಕ್ಷ ಮಾ.ನಾ.ಮಂಜೇಗೌಡ ಮಾತನಾಡಿ, ದೇಶದಲ್ಲಿ ಪ್ರಸಕ್ತ ಸನ್ನಿವೇಶದಲ್ಲಿ ಮಹಿಳೆಯರು ತಾವು ಕಾರ್ಯನಿರ್ವಹಿಸುವ ಸ್ಥಳಗಳಲ್ಲಿ ದಬ್ಟಾಳಿಕೆ ಮತ್ತು ದೌರ್ಜನ್ಯಗಳು ನಡೆಯುತ್ತಿದ್ದರೂ ಎಲ್ಲವನ್ನು ಮೆಟ್ಟಿ ನಿಂತು ಎಲ್ಲಾ ಕ್ಷೇತ್ರಗಳಲ್ಲಿಯೂ ತಮ್ಮ ಸಾಧನೆ ತೋರುತ್ತಿರುವುದು ಹೆಮ್ಮೆಯ ವಿಷಯ. ಸರ್ಕಾರಗಳು ಸ್ತ್ರೀ-ಪುರುಷರು ಸಮಾನರು ಎಂಬ ಕಾನೂನುಗಳನ್ನು ಜಾರಿಗೆ ತಂದು ವಿವಿಧ ಯೋಜನೆಗಳ ಮೂಲಕ ಮಹಿಳೆಯರ ಅಭಿವೃದ್ಧಿಗೆ ಶ್ರಮಿಸುತ್ತಿದ್ದು, ಅವುಗಳನ್ನು ಸದುಪಯೋಗಪಡಿಸಿಕೊಂಡು ಸ್ವಾವಲಂಬಿ ಜೀವನ ನಡೆಸಲು ಮುಂದಾಗಬೇಕು ಇಂತಹ ಸಾಧನೆಗೆ ಕಿತ್ತೂರು ರಾಣಿ ಚೆನ್ನಮ್ಮ ಸಾಕ್ಷಿಯಾಗುತ್ತಾರೆ ಎಂದ ಅವರು ಬ್ರಿಟಿಷರ ಸೈನ್ಯದ ವಿರುದ್ಧ ಪ್ರಥಮವಾಗಿ ಹೋರಾಟ ಮಾಡಿ ಜಯಗಳಿಸಿದ ಚನ್ನಮ್ಮಳ ವಿಜಯೋತ್ಸವವನ್ನೇ ಸರ್ಕಾರ ಜಯಂತಿಯಾಗಿ ಆಚರಿಸುತ್ತಿದೆ. ದಿಟ್ಟ ಹೋರಾಟಗಾರ್ತಿಯಾದ ಕಿತ್ತೂರು ರಾಣಿ ರಾಜ್ಯದ ಉಳಿಗಾಗಿ ವ್ಯವಸ್ಥಿತ ಸುಸಜ್ಜಿತ ಕೋಟೆಯನ್ನು ಹೊಂದಿ ಪತಿಯನ್ನು ಕಳೆದುಕೊಂಡರೂ ಎದೆಗುಂದದೆ ದಕ್ಷತೆ ಮತ್ತು ಪ್ರಾಮಾಣಿಕತೆಯಿಂದ ಹೋರಾಟ ಮಾಡಿದ ವೀರ ಮಹಿಳೆ ಎಂದು ತಿಳಿಸಿದ ಅವರು, ಚನ್ನಮ್ಮಳಂತಹ ವೀರ ಮಹಿಳೆಯರಿಂದ ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರಿಗೆ ಉನ್ನತ ಸ್ಥಾನಮಾನ ಮತ್ತು ಗೌರವ ದೊರಕಲು ಸಾಧ್ಯವಾಯಿತು. ಇಂತಹ ಗಣ್ಯ ಮಹನೀಯರ ಜಯಂತಿಗಳ ಆಚರಣೆಯಿಂದ ಅವರ ಇತಿಹಾಸ, ಮಹತ್ವಗಳನ್ನು ತಿಳಿಸಿದರೆ ಜನ ಸಾಮಾನ್ಯರ ಮನಸ್ಸಿನ ಮೇಲೆ ಪ್ರಭಾವ ಬೀರಿ ಉತ್ತಮ ಸಮಾಜ ನಿರ್ಮಾಣವಾಗಲಿದೆ ಎಂದು ಅಭಿಪ್ರಾಯಪಟ್ಟರು.


ಕಾರ್ಯಕ್ರಮದಲ್ಲಿ ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಹೆಬ್ಬಾಳು ಹಾಲಪ್ಪ, ಬೇಲೂರು ತಾಲ್ಲೂಕು ರೈತ ಸಂಘದ ಪ್ರಧಾನ ಕಾರ್ಯದರ್ಶಿ ಹುಲ್ಲೇನಹಳ್ಳಿ ಬಸವರಾಜು,ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರಾದ ಹರೀಶ ಸೇರಿದಂತೆ ತಾಲ್ಲೂಕು ಇಲಾಖೆವಾರು ಅಧಿಕಾರಿಗಳು ಮತ್ತು ಇನ್ನೂ ಮುಂತಾದವರು ಹಾಜರಿದ್ದರು.