ಹಲ್ಮಿಡಿ ಬಗ್ಗೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ನಿರ್ಲಕ್ಷ್ಯ- ಕರವೇ ಆಕ್ರೋಶ

0
125

ಟುಡೇ ಹಾಸನ ನ್ಯೂಸ್‌, ಬೇಲೂರು 

ಕನ್ನಡ ಭಾಷೆಗೆ ಪ್ರಥಮ ಶಿಲಾ ಶಾಸನ ನೀಡಿದ ಬೇಲೂರು ತಾಲ್ಲೂಕಿನ ಹಲ್ಮಿಡಿ ಗ್ರಾಮದ ಬಗ್ಗೆ ಜನಪ್ರತಿನಿಧಿಗಳು ಹಾಗೂ ಸಂಬಂಧಿಸಿದ ಇಲಾಖೆ ತೀವ್ರ ನಿರ್ಲಕ್ಷ್ಯ ವಹಿಸಿದ್ದಾರೆ. ಶೀಘ್ರವೇ ಉನ್ನತೀಕರಣಗೊಂಡ ಶಾಸನ ಪ್ರತಿಕೃತಿಯನ್ನು ಸ್ಥಾಪಿಸಬೇಕು ಇಲ್ಲವಾದರೆ ಹಲ್ಮಿಡಿ ಗ್ರಾಮದಲ್ಲಿ ನವೆಂಬರ್ ೧ ರಂದು ಪ್ರತಿಭಟನೆ ನಡೆಸಿ ಕರಾಳ ದಿನ ಆಚರಿಸಬೇಕಾಗುತ್ತದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಘಟಕ ಅಧ್ಯಕ್ಷ ಚಂದ್ರಶೇಖರ ಹಾಗೂ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಖಾದರ್ ಎಚ್ಚರಿಕೆ ನೀಡಿದರು.

ಪತ್ರಿಕಾಗೋಷ್ಠಿ ಮಾತನಾಡಿದ ಅವರು ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನ ಮಾನ ನೀಡಲು ಬೇಲೂರು ತಾಲ್ಲೂಕಿನಲ್ಲಿ ಲಭ್ಯವಾದ ಹಲ್ಮಿಡಿ ಶಾಸನ ಪ್ರಾಮುಖ್ಯತೆ ವಹಿಸಿದೆ.ಇಂತಹ ಹಲ್ಮಿಡಿ ಇತ್ತೀಚಿನ ಜನಪ್ರನಿಧಿಗಳು ಹಾಗೂ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದ ಅಭಿವೃದ್ಧಿ ‌ಮರಿಚೀಕೆಯಾಗಿದೆ. ಹಲ್ಮಿಡಿಗೆ ಇನ್ನೂ ಹೆಚ್ಚಿನ ಹೊರ ಸ್ವರೂಪ ನೀಡಬೇಕು ಎಂಬ ಹಿನ್ನೆಲೆಯಲ್ಲಿ ದಾನಿಗಳು ಹಾಗೂ ಉದ್ಯಮಿಗಳಾದ ಗ್ರಾನೈಟ್ ರಾಜಶೇಖರ ಸುಮಾರು ೨೫ ಲಕ್ಷಕ್ಕೂ ಹೆಚ್ಚಿನ ಹಣ ವೆಚ್ಚಭರಿಸಿ ಸುಂದರವಾದ ಮಂಟಪ ನಿರ್ಮಿಸಿದ್ದಾರೆ. ನಮ್ಮ ತಾಲ್ಲೂಕಿನಲ್ಲಿ ಕೂಡ ಕೋಟ್ಯಾಧಿಪತಿಗಳು ಇದ್ದರೂ ಉದ್ಯಮಿ ಗ್ರಾನೈಟ್ ರಾಜಶೇಖರ ಮಾಡಿದ ಕಾರ್ಯವನ್ನು ಇಡೀ ಕನ್ನಡಿಗರು ಅಭಿನಂದಿಸಬೇಕಿದೆ ಎಂದ ಅವರು ಕಳೆದ ಮೂರು ವರ್ಷದಿಂದ ನಡೆದ ಉನ್ನತೀಕರಣದ ಕಾಮಗಾರಿ ಅಪೂರ್ಣವಾಗಿದೆ. ಅಲ್ಲದೆ ಉದ್ಘಾಟನೆ ಭಾಗ್ಯ ಕಂಡಿಲ್ಲ, ಇತ್ತೀಚೆಗೆ ಬೇಲೂರು ಹಳೇಬೀಡು ‌ಮತ್ತು ಚಿಕ್ಕಮಗಳೂರು ಕಡೆ ಸಾಗುವ ಬಹುತೇಕ ಪ್ರವಾಸಿಗರು ಹಲ್ಮಿಡಿಗೆ ತೆರಳುತ್ತಾರೆ. ಆದರೆ ನೂತನವಾಗಿ ನಿರ್ಮಿಸಿದ ಮಂಟಪದಲ್ಲಿ ಹಲ್ಮಿಡಿ ಶಿಲಾ ಶಾಸನದ ಪ್ರತಿಕೃತಿ ಇಲ್ಲದಿರುವುದು ಪ್ರವಾಸಿಗರಿಗೆ ನಿರಾಶೆ ಮೂಡಿದೆ. ಅಲ್ಲದೆ ಹಲ್ಮಿಡಿಗೆ ತೆರಳುವ ಸುಮಾರು ೭ ಕೀಮೀ ದೂರದ ರಸ್ತೆ ಹದಗೆಟ್ಟ ಸಂಚಾರಕ್ಕೆ ತೊಂದರೆಯಾಗಿದೆ. ಈ ಹಿಂದಿನ ಶಾಸಕರು ಕೂಡ ಭರವಸೆ ನೀಡದಂತೆ ಹಾಲಿ ಶಾಸಕರು ಕೂಡ ಭರವಸೆಯಲ್ಲಿಯೇ ಬೇಲೂರಿನ ಅಭಿವೃದ್ಧಿ ಮಾಡುತ್ತಿದ್ದಾರೆ. ಹೇಳಿ ಕೇಳಿ ಕನ್ನಡಿಗರ ಸ್ವಾಭಿಮಾನಿದ ಸಂಕೇತವಾಗಿರುವ ಹಲ್ಮಿಡಿ ಬಗ್ಗೆ ನಿರ್ಲಕ್ಷ್ಯ ಹೊಂದಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ಈಗಾಗಲೇ ಹಲ್ಮಿಡಿ ಮಂಟಪ ಉನ್ನತೀಕರಣವಾಗಿದ್ದು, ಅದನ್ನು ಪೂರ್ಣ ಕೆಲಸವಾದ ಬಳಿಕವೇ ಉದ್ಘಾಟನೆ ನಡೆಸಲಿ ಅದಕ್ಕೆ ನಮ್ಮ ಯಾವುದೇ ತಕರಾರು ಇಲ್ಲ, ಆದರೆ ಶಾಸನದ ಪ್ರತಿಕೃತಿಯನ್ನು ಇದೇ ನವೆಂಬರ್ ೧ ಕನ್ನಡ ರಾಜ್ಯೋತ್ಸವ ದಿನ ಸ್ಥಾಪಿಸಿ. ಅಲ್ಲಿಂದಲೇ ಬೇಲೂರಿನಲ್ಲಿ ನಡೆಯುವ ಕನ್ನಡ ರಾಜ್ಯೋತ್ಸವಕ್ಕೆ ಕರವೇ ಜ್ಯೋತಿಯನ್ನು ತರಲಿದೆ. ಇದಕ್ಕೆ ಉದ್ಯಮಿ ಗ್ರಾನೈಟ್ ರಾಜಶೇಖರ ಅವರನ್ನು ಆಹ್ವಾನಿಸಲಾಗುತ್ತದೆ.‌ಕಳೆದ ಭಾರಿ ಕೂಡ ಅವರೇ ಜ್ಯೋತಿಯನ್ನು ಹಸ್ತಾಂತರ ಮಾಡಿದ ಬಗ್ಗೆ ನೆನಪು ಮಾಡಿದ ಅವರು ಜಿಲ್ಲಾ ಮಂತ್ರಿಗಳು ಮತ್ತು ಜಿಲ್ಲಾಡಳಿತ ಬೇಲೂರಿನ ಬಗ್ಗೆ ಮಲತಾಯಿ ಧೋರಣೆ ಅನುಸರಣೆ ಮಾಡುತ್ತಿದ್ದಾರೆ. ಸರ್ಕಾರದಿಂದ ಇದೇ ಮೊದಲು ದಸರಾವನ್ನು ತುಮಕೂರಿನಲ್ಲಿ ನಡೆಸಿದ ಜಿಲ್ಲಾ ಮಂತ್ರಿಗಳು ಬೇಲೂರಿನಲ್ಲಿ ‌ನಡೆಯುವ ಐತಿಹಾಸಿಕ ಹೊಯ್ಸಳ ಮಹೋತ್ಸವ ಮತ್ತು ಹಲ್ಮಿಡಿ ಉತ್ಸವ ನಡೆಸಲು ಏಕೆ ಮೀನಾ ಮೇಷ ಎಣಿಸುತ್ತಿದ್ದಾರೆ ಎಂದು ಜಿಲ್ಲಾ ಮಂತ್ರಿಗಳು ಮತ್ತು ಜಿಲ್ಲಾಡಳಿತದ ಬಗ್ಗೆ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಕರವೇ ತಾಲ್ಲೂಕು ಘಟಕದ ಪದಾಧಿಕಾರಿಗಳಾದ ಮಾಳೆಗೇರೆ ತಾರಾನಾಥ, ಕುಮಾರ್, ಹನೀಫ್ ಮತ್ತು ಪ್ರಸನ್ನ ಹಾಜರಿದ್ದರು.