ದೇಗುಲದ ಸಮೀಪದಲ್ಲಿ ಅಡ್ಡಾದಿಡ್ಡಿ ವಾಹನ ನಿಲುಗಡೆ – ಜನತೆ ಆಕ್ರೋಶ

0
56

ಟುಡೇ ಹಾಸನ ನ್ಯೂಸ್‌ ವರದಿ, ಬೇಲೂರು.

ಚನ್ನಕೇಶವಸ್ವಾಮಿ ದೇಗುಲದ ಸುತ್ತಲಿನ ರಸ್ತೆಯಲ್ಲಿ ಪ್ರವಾಸಿಗರು ಅಡ್ಡಾದಿಡ್ಡಿ ವಾಹನ ನಿಲುಗಡೆ ಮಾಡುತ್ತಿರುವ ಹಿನ್ನಲೆಯಲ್ಲಿ ವಾಹನ ಸವಾರರಿಗೆ ಮತ್ತು ಸ್ಥಳೀಯರ ಸಂಚಾರಕ್ಕೆ ತೀವ್ರ ಕಷ್ಟವಾಗಿದೆ, ಶೀಘ್ರವೇ ಸಂಬಂಧಪಟ್ಟ ವರು ಈ ಬಗ್ಗೆ ಗಮನ ನೀಡಬೇಕು ಇಲ್ಲವಾದರೆ ಹೋರಾಟ ಅನಿವಾರ್ಯವೆಂದು ಇಲ್ಲಿನ ಸ್ಥಳೀಯರು ತಮ್ಮ ಆಕ್ರೋಶವನ್ನು ವ್ಯಕ್ತ ಪಡಿಸಿದ್ದಾರೆ.

ಹೌದು..! ವಿಶ್ವ ಪಾರಂಪರಿಕ ಪಟ್ಟಿಗೆ ಸೇರ್ಪಡೆಯಾಗುವ ಮೂಲಕ ಜಾಗತಿಕ ಮನ್ನಣೆ ಪಡೆದ ಬೇಲೂರಿಗೆ ನಿತ್ಯ ಸಾವಿರಾರು ಪ್ರವಾಸಿಗರು ಸೇರಿದಂತೆ ಚನ್ನಕೇಶವನ ಭಕ್ತರು ಬರುತ್ತಾರೆ. ಇಂತಹ ಸ್ಥಳದಲ್ಲಿ ಸಂಬಂಧ ಪಟ್ಟ ಇಲಾಖೆಗಳ ಜಾಣ ಮೌನದಿಂದಲೇ ನಿತ್ಯ ಟ್ರಾಫಿಕ್ ಜಾಮ್ ನಿಂದ ಸ್ಥಳೀಯರು ಕಷ್ಟ ಅನುಭವಿಸುವ ಹೀನಸ್ಥಿತಿದೆ. ಈ ಬಗ್ಗೆ ಕನಿಷ್ಟ ಕ್ರಮಕೈಗೊಳ್ಳಲು ಯಾರು ಕೂಡ ಮುಂದೆ ಬರುತ್ತಿಲ್ಲ ಎಂದು ಸ್ಥಳೀಯರು ತೀವ್ರ ಬೇಸರವನ್ನು ವ್ಯಕ್ತ ಪಡಿಸಿದ್ದಾರೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಮೊಬೈಲ್ ಅಂಗಡಿ ಬ್ಯಾಡರಹಳ್ಳಿ ಆನಂದ್, ಇಲ್ಲಿನ ಶಿಲ್ಪಕಲೆಗಳ ವೀಕ್ಷಣೆಗೆ ನಿತ್ಯ ದೇಶ-ವಿದೇಶದಿಂದ ಪ್ರವಾಸಿಗರು ಮತ್ತು ಭಕ್ತರು ಬರುತ್ತಾರೆ. ಬರುವ ಪ್ರವಾಸಿಗರು ಬಹುತೇಕ ದೊಡ್ಡ ದೊಡ್ಡ ವಾಹನಗಳು ಮತ್ತು ತಮ್ಮ ಕಾರಿನಲ್ಲಿ ಬರುತ್ತಾರೆ. ದೇಗುಲದ ಹಿಂಭಾಗದಲ್ಲಿ ಪಾರ್ಕಿಂಗ್ ಸೌಲಭ್ಯವಿದ್ದರೂ ಯಾರು ಕೂಡ ಅಲ್ಲಿಗೆ ತೆರಳುತ್ತಿಲ್ಲ, ದೇಗುಲದ ಮುಖ್ಯರಸ್ತೆ, ದೇಗುಲದ ಎಡ-ಬಲ ರಸ್ತೆ ಮತ್ತು ಹಿಂಭಾಗದಲ್ಲಿ ಎಲ್ಲೆಂದರಲ್ಲಿ ಅಡ್ಡಾದಿಡ್ಡಿ ವಾಹನಗಳನ್ನು ನಿಲುಗಡೆ ಮಾಡುವ ಮೂಲಕ ದೇಗುಲಕ್ಕೆ ತೆರಳುತ್ತಾರೆ. ಇದ್ದರಿಂದ ಸ್ಥಳಿಯರು ತಮ್ಮ ವಾಹನಗಳ ಸಂಚಾರಕ್ಕೆ ಕಷ್ಟವಾಗುತ್ತಿಲ್ಲ, ರಸ್ತೆಯ ಎರಡು ಭಾಗದಲ್ಲಿ ನಿಲುಗಡೆ ಮಾಡುವ ಬದಲು ಒಂದು ಕಡೆಯಲ್ಲಿ ನಿಲ್ಲಿಸುವ ಪರಿಪಾಠಕ್ಕೆ ಇಲಾಖೆಯ ಅಧಿಕಾರಿಗಳು ತ್ವರಿತ ಕ್ರಮವಹಿಸಿದರೆ ನಿಜಕ್ಕೂ ಸುಗಮ ಸಂಚಾರಕ್ಕೆ ಅನುವು ಮಾಡಬಹುದು. ಈ ಬಗ್ಗೆ ದೇಗುಲದ ಆಡಳಿತ ಗಮನ ಹರಿಸಬೇಕು ಎಂದು ತಿಳಿಸಿದರು.

ಹೇಳಿ-ಕೇಳಿ ಪ್ರವಾಸಿತಾಣ ಬೇಲೂರಿನ ಮುಖ್ಯರಸ್ತೆ, ದೇಗುಲರಸ್ತೆ ತೀವ್ರ ಕಿರಿದಾದ ಕಾರಣದಿಂದ ಪ್ರತಿನಿತ್ಯ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿರುವ ಹಿನ್ನಲೆಯಲ್ಲಿ ಬೇಲೂರು ಮುಖ್ಯರಸ್ತೆ, ದೇಗುಲರಸ್ತೆಗಳನ್ನು ಅಗಲೀಕರಣ ಮಾಡಲು ಸಂಬಂಧ ಪಟ್ಟ ಜನಪ್ರತಿನಿಧಿಗಳು ಮತ್ತು ಇಲಾಖೆಯ ಅಧಿಕಾರಿಗಳು ಮುಂದಾಗಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣಶೆಟ್ಟಿ ಬಣ) ತಾಲ್ಲೂಕು ಅಧ್ಯಕ್ಷ ವಿ.ಎಸ್.ಬೋಜೇಗೌಡ ಹೇಳಿದರು.

ವರದಿ : ಹೆಬ್ಬಾಳು ಹಾಲಪ್ಪ.