ಟುಡೇ ಹಾಸನ ನ್ಯೂಸ್ ವರದಿ : ಹಾಸನ
ಹಾಸನ ಜಿಲ್ಲೆಯಲ್ಲಿ ಸಂಚಾರ ದಟ್ಟಣೆಯೇ ಒಂದು ದೊಡ್ಡ ಸಮಸ್ಯೆಯಾಗಿದೆ. ಇದರ ನಿಯಂತ್ರಣಕ್ಕೆ ಸಂಚಾರಿ ಪೋಲಿಸರು ಹರಸಾಹಸ ಪಡುತ್ತಿದ್ದರೆ, ಇನ್ನೊಂದೆಡೆ ಪುಂಡರ ಬೈಕ್ ವೀಲಿಂಗ್ ಮತ್ತೊಂದು ಬಹುದೊಡ್ಡ ಸಮಸ್ಯೆಯಾಗಿದ್ದು, ಜನರ ಜೀವಕ್ಕೂ ಸಂಚಕಾರವನ್ನು ತಂದೊಡ್ಡುವಂತಿದೆ.
ಹಾಸನ ರಾಷ್ಟ್ರೀಯ ಹೆದ್ದಾರಿ, ನಗರದ ಮುಖ್ಯ ರಸ್ತೆ, ಹಾಗೂ ಜನನಿಬಿಡ ರಸ್ತೆಗಳು ಸೇರಿದಂತೆ ಹಲವು ಕಡೆಗಳಲ್ಲಿ ಕೆಲ ಅಪ್ರಾಪ್ತ ಹಾಗೂ ಪುಂಡ ಯುವಕರು ಹಗಲು, ರಾತ್ರಿ ವೇಳೆ ವೀಲ್ಹಿಂಗ್ ಮಾಡುತ್ತ ಹುಚ್ಚಾಟ ಪ್ರದರ್ಶಿಸುತ್ತಿದ್ದಾರೆ. ಬೈಕ್ ವ್ಹೀಲಿಂಗ್ ಮಾಡುತ್ತಿರುವ ಯುವಕರು ಒಂದೊಂದು ಬೈಕ್ನಲ್ಲಿ ಮೂವರು ಯುವಕರು ಸವಾರಿ ಮಾಡುತ್ತಾ ರಸ್ತೆ ನಿಯಮ ಉಲ್ಲಂಘಿಸಿರುವುದರ ಜೊತೆಗೆ, ಅಪಾಯಕಾರಿ ಬೈಕ್ ವ್ಹೀಲಿಂಗ್ ಕೂಡ ಮಾಡುತ್ತಿದ್ದಾರೆ.
ಪುಂಡ ಯುವಕರು ರಾಷ್ಟ್ರೀಯ ಹೆದ್ದಾರಿ 75, ಹಾಸನದ ಪ್ರಮುಖ ರಸ್ತೆಗಳಲ್ಲಿ ವೀಲ್ಹಿಂಗ್ ಮಾಡಿ ಇನ್ಸ್ಟಾಗ್ರಾಂನಲ್ಲಿ ವಿಡಿಯೋ ಅಪ್‌ಲೋಡ್ ಮಾಡಿದ್ದಾರೆ. ಸಯ್ಯದ್ ಮಸೂದ್ ಎಂಬುವವರ ಇನ್ಸ್ಟಾಗ್ರಾಮ್ ಅಕೌಂಟ್‌ನಲ್ಲಿ ಬೈಕ್ ವೀಲ್ಹಿಂಗ್ ವಿಡೀಯೋ ಅಪ್‌ಲೋಡ್ ಮಾಡಲಾಗಿದೆ. ಯುವಕರು ತನ್ನ ಫೋಟೋ ಜೊತೆಗೆ ದಾವುದ್ ಫೋಟೋ ಕೂಡ ಹಾಕಿಕೊಂಡಿದ್ದಾರೆ. ಪ್ರಚಾರ ಗಿಟ್ಟಿಸಿಕೊಳ್ಳುವ ಸಲುವಾಗಿ ಯುವಕರು ಈ ಹುಚ್ಚಾಟವನ್ನು ನಡುರಸ್ತೆಯಲ್ಲಿ ಮಾಡುವುದಲ್ಲದೆ ಅದನ್ನು ವಿಡಿಯೋ ಮಾಡಿಕೊಂಡು ಇನ್‌ಸ್ಟಾಗ್ರಾಂ, ಫೇಸ್‌ಬುಕ್ ಸೇರಿದಂತೆ ಇನ್ನಿತರ ಸಾಮಾಜಿಕ ಜಾಲತಾಣಗಳ ಮೂಲಕ ಹರಿಬಿಟ್ಟಿರುವುದು ಸಾರ್ವಜನಿಕ ವಲಯದಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.
ಬೈಕ್ ವೀಲಿಂಗ್ ನಿಯಂತ್ರಣಕ್ಕಾಗಿ ಪೊಲೀಸ್ ಇಲಾಖೆ ಕಾನೂನು ಕ್ರಮಗಳನ್ನು ಕೈಗೊಂಡಿದ್ದರೂ ಸಹ ಅಲ್ಲಲ್ಲಿ ವೀಲಿಂಗ್ ಪ್ರಕರಣಗಳು ಕಂಡುಬರುತ್ತಲೇ ಇವೆ. ಬೈಕ್ ವ್ಹೀಲಿಂಗ್ ಮಾಡುವವರ ವಿರುದ್ಧ ಪೊಲೀಸರು ಎಷ್ಟೇ ಕ್ರಮ ಕೈಗೊಂಡಿದ್ದರೂ ಸಹ ಕೆಲ ಪುಂಡರು ಮಾತ್ರ ಬುದ್ಧಿ ಕಲಿತಿಲ್ಲ ಎಂಬುವುದು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿರುವ ಆರೋಪ.
ಕೆಲವರು ವೀಲಿಂಗ್ ಕಾರಣಕ್ಕಾಗಿಯೇ ತಮ್ಮ ಬೈಕ್ ಅನ್ನು ಆಲ್ಟ್ರೇಷನ್ ಮಾಡಿಸಿಕೊಂಡಿರುತ್ತಾರೆ. ಅದನ್ನು ತಮಗೆ ಬೇಕಾದಂತೆ ಹಲವಾರು ರೀತಿಯ ಮಾರ್ಪಾಡುಗಳನ್ನು ಮಾಡಿಸಿಕೊಂಡಿರುತ್ತಾರೆ. ಹ್ಯಾಂಡಲ್‌ಗಳ ಬದಲಾವಣೆ, ದೊಡ್ಡ ಗಾತ್ರದ ವೀಲ್‌ಗಳು, ಸ್ಟಿಕ್ಕರ್‌ಗಳು, ಲೈಟಿಂಗ್ ಸಿಸ್ಟಮ್, ಮಡ್‌ಗಾರ್ಡ್ ತೆಗೆದುಹಾಕುವುದು, ಸೈಲೆನ್ಸರ್‌ಗಳ ಮಾರ್ಪಾಡು ಸೇರಿದಂತೆ ಇನ್ನಿತರ ಆಲ್ಟ್ರೇಷನ್‌ಗಳನ್ನು ಮಾಡಿಸಿಕೊಳ್ಳುತ್ತಾರೆ. ಈ ಮೂಲಕ ತಮ್ಮ ಸ್ನೇಹಿತ ವರ್ಗದಲ್ಲಿ ಹೆಚ್ಚುಗಾರಿಕೆಯ ಪ್ರದರ್ಶನಗಳನ್ನು ಮಾಡಿಕೊಂಡು ವೀಲಿಂಗ್ ಮಾಡಲು ರಸ್ತೆಗಿಳಿಯುತ್ತಿದ್ದಾರೆ.
ಪೋಷಕರ ಪಾತ್ರ : ಯುವಕರ ಈ ವೀಲಿಂಗ್ ಪ್ರಹಸನಗಳು ನಿಲ್ಲಬೇಕೆಂದರೆ ಪೋಷಕರ ಪಾತ್ರ ಬಹಳ ದೊಡ್ಡದಿರುತ್ತದೆ. ಮಕ್ಕಳು ಕೇಳಿದ್ದನ್ನೆಲ್ಲ ಕೊಡುವ ಮೊದಲು ಅದರ ಅವಶ್ಯಕತೆಯನ್ನು ಮೊದಲು ತಿಳಿದುಕೊಳ್ಳುವ ಕೆಲಸ ಆಗಬೇಕು. ಇನ್ನು ಮಕ್ಕಳಿಗೆ ವಾಹನಗಳನ್ನು ಕೊಡಿಸಿದ ಮೇಲೆ ಅವರ ಚಲನವಲನಗಳ ಮೇಲೆ ನಿಗಾ ವಹಿಸಿ ಪೋಷಕರು ಎಚ್ಚೆತ್ತುಕೊಳ್ಳಬೇಕಿದೆ.
– ಬಾ.ನಂ.ಲೋಕೇಶ್ ಶಿಕ್ಷಕರು ಹಾಸನ.